ಸೇವೆ

ಯಾವುದೇ ಒಬ್ಬವ್ಯಕ್ತಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರಿ ಸಂಘ/ಸ್ವ-ಸಹಾಯ ಗುಂಪಿನಲ್ಲಿ ಸದಸ್ಯನಾಗಿ ಮೂರು ತಿಂಗಳು ಗತಿಸಿದ್ದಲ್ಲಿ ಅವರ ಕುಟುಂಬವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ವಾರ್ಷಿಕ ವಂತಿಗೆ ಪಾವತಿಸಿದಲ್ಲಿ ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಅವಲಂಬಿತ ಸದಸ್ಯರು ಸಹಕಾರ ಸಂಘದ ಸದಸ್ಯರಾಗಬೆಕಾಗಿಲ್ಲ.

ಸಹಕಾರಿ ಮಿನುಗಾರರು, ಸಹಕಾರಿ ಬೀಡಿಕಾರ್ಮಿಕರು ಮತ್ತು ಸಹಕಾರಿ ನೇಕಾರರು ಕೂಡ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

ಕುಟುಂಬಎಂದರೆ ಪ್ರಧಾನ ಅರ್ಜಿದಾರರ ತಂದೆ/ತಾಯಿ, ಗಂಡ/ಹೆಂಡತಿ, ಗಂಡು ಮಕ್ಕಳು, ಮದುವೆಯಾಗದ ಹೆಣ್ಣು ಮಕ್ಕಳು, ಸೂಸೆಯಂದಿರು ಮತ್ತು ಮೊಮ್ಮಕ್ಕಳು ಎಂದು ಅರ್ಥೈಯಿಸುವುದು.

ಮದುವೆಯಾಗಿರುವ ಹೆಣ್ಣು ಮಗಳು ಹಾಗು ಅವಳ ಮಕ್ಕಳು ಪ್ರಧಾನ ಅರ್ಜಿದಾರರಾದ ಅವರ ತಂದೆ/ತಾಯಿ/ಅಣ್ಣ/ತಮ್ಮ ಇವರ ಕುಟುಂಬದಲ್ಲಿಯೇ ಯಾವುದೇ (ವಿಧವೆ, ವಿಚ್ಛೇದನ, ಬೇರ್ಪಟ್ಟಿರುವುದು (Separated) ಇತ್ಯಾದಿ) ಕಾರಣಕ್ಕೆ ವಾಸವಾಗಿದ್ದರೆ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅದಾಗ್ಯೂ ಪ್ರಸಕ್ತ ಸಾಲಿನ ಯೋಜನೆಯ ಅವಧಿಯಲ್ಲಿ ಮದುವೆಯಾದ ಹೆಣ್ಣು ಮಗಳು ತಂದೆ/ತಾಯಿ/ಅಣ್ಣ/ತಮ್ಮ ಇವರ ಜೂತೆ ವಾಸವಾಗಿರದೇ ಸಂಘದ ಕಾರ್ಯವ್ಯಾಪ್ತಿ ಹೊರಗೆ ವಾಸವಿದ್ದರೆ ಅಂತಹ ಸಂದರ್ಭದಲ್ಲಿ ಯೋಜನೆ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಆದರೆ, ಅವಳೇ ಸಹಕಾರ ಸಂಘದ ಸದಸ್ಯೆಯಾಗಿ ಮೂರು ತಿಂಗಳು ಕಳೆದಿದ್ದಲ್ಲಿ ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.

ಪ್ರಸಕ್ತ ಸಾಲಿನಲ್ಲಿ ಮದುವೆಯಾಗದ ಹೆಣ್ಣುಮಕ್ಕಳಿಗೆ ಪ್ರಧಾನ ಅರ್ಜಿದಾರರು ವಂತಿಗೆ ಪಾವತಿಸಿದ್ದು, ಆನಂತರ ಮದುವೆಯಾಗಿದ್ದಲ್ಲಿ ಅಂತಹ ಮದುವೆಯಾದ ಹೆಣ್ಣು ಮಗಳು ಪ್ರಸಕ್ತ ಸಾಲಿನಲ್ಲಿ ಯಶಸ್ವಿನಿ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ.

ಅಣ್ಣ/ತಮ್ಮ, ಅಕ್ಕ/ತಂಗಿ, ಅತ್ತೆ/ಮಾವ ಹಾಗು ಚಿಕ್ಕಪ್ಪ/ದೊಡ್ಡಪ್ಪ ಮತ್ತು ಅವರ ಕುಟುಂಬದ ಸದಸ್ಯರು ಇತ್ಯಾದಿ ಸಂಬಂಧಿಗಳು ಯೋಜನೆಯಡಿ ಅರ್ಹರಾಗುವುದಿಲ್ಲ. ಅದಾಗ್ಯು ಒಂದು ಮನೆಯಲ್ಲಿ ಸೊಸೆ ಪ್ರಧಾನ ಅರ್ಜಿದಾರರಾಗಿದ್ದಲ್ಲಿ ಅವರ ಗಂಡನ ತಂದೆ/ತಾಯಿ ಅಂದರೆ ಅರ್ಜಿದಾರರ ಅತ್ತೆ/ಮಾವ ರವರು ಅರ್ಹ ಸದಸ್ಯರಾಗುತ್ತಾರೆ. ಆದರೆ ಅರ್ಜಿದಾರರ ತಂದೆ/ತಾಯಿಯವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲು ಬರುವುದಿಲ್ಲ. ಮೇಲೆ ವಿವರಿಸಿರುವಂತೆ ಅರ್ಹ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾವುದೇ ಸದಸ್ಯರನ್ನು ಯಶಸ್ವಿನಿ ಯೋಜನೆಗೆ ಸೇರಿಸುವಂತಿಲ್ಲ. ಒಂದು ವೇಳೆ ಪ್ರಧಾನ ಅರ್ಜಿದಾರರಾಗಲಿ ಅಥವಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಲಿ ಅರ್ಹರಲ್ಲದ ಸದಸ್ಯರನ್ನು ಸೇರಿಸಿರುವುದು ನಂತರ ಗಮನಕ್ಕೆ ಬಂದರೆ, ಅಂತಹ ಅನರ್ಹ ಸದಸ್ಯರಿಂದ ವಂತಿಗೆ ಪಾವತಿಸಿಕೊಂಡು ಕಾರ್ಡಿನಲ್ಲಿ ಸೇರಿಸಿದ್ದರೂ ಸಹ ಅವರು ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗುವುದಿಲ್ಲ, ಇಂತಹ ಪ್ರಕರಣಗಳಲ್ಲಿ ನಿಯಮಾನುಸಾರ ಕ್ರಮಜರುಗಿಸಲಾಗುವುದು.

ವಾರ್ಷಿಕ ವಂತಿಗೆ:

2022-23ನೇ ಸಾಲಿಗೆ ಗ್ರಾಮೀಣ ಸಹಕಾರ ಸಂಘಗಳ/ಸ್ವ-ಸಹಾಯ ಗುಂಪುಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ  ರೂ.500/-ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ.20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂ.100/-ಗಳನ್ನು ಪಾವತಿಸತಕ್ಕದ್ದು, ನಗರ ಸಹಕಾರ ಸಂಘಗಳಿಗೆ ಮೊತ್ತ ಕ್ರಮವಾಗಿ ರೂ.1000/- ಮತ್ತು ರೂ.200/- ಆಗಿರುತ್ತದೆ.

ವಯಸ್ಸಿನ ಮಿತಿ:

ಯಶಸ್ವಿನಿ ಯೋಜನೆಯಡಿ ಸದಸ್ಯರಾಗಲು ಯಾವುದೇ ವಯೋಮಿತಿ ನಿರ್ಬಂಧವಿರುವುದಿಲ್ಲ.

ನವಜಾತ ಶಿಶುವಿನ ತಾಯಿ ಹೆಸರು ಯಶಸ್ವಿನಿ ಕಾರ್ಡ್ನಲ್ಲಿದ್ದರೆ 30 ದಿನಗಳವರೆಗೆ ತಾಯಿ ಹೆಸರು ಇರುವ ಯಶಸ್ವಿನಿ ಕಾರ್ಡಿನ ಆಧಾರದ ಮೇಲೆ ಯೋಜನೆಯಡಿಯಲ್ಲಿ ಬರುವ ಸೌಲಭ್ಯವನ್ನು ನವಜಾತ ಶಿಶು ಪಡೆಯಬಹುದು.

ಅನರ್ಹ ವರ್ಗಗಳು:

ಸಮಾಪನಗೊಂಡ ಅಥವಾ ನಿಷ್ಕ್ರಿಯೆಗೊಂಡ ಸಹಕಾರ ಸಂಘಗಳ ಸದಸ್ಯರು ಮತ್ತು ನೌಕರರ ಸಹಕಾರ ಸಂಘಗಳ ಸದಸ್ಯರಿಗೆ ಯೋಜನೆ ಅನ್ವಯಿಸುವುದಿಲ್ಲ.

ಪ್ರಧಾನ ಅರ್ಜಿದಾರರು ಮತ್ತು ಅವನ ಕುಟುಂಬದ ಯಾವುದೇ ಸದಸ್ಯನು ಸರ್ಕಾರಿ ನೌಕರರಾಗಿದ್ದಲ್ಲಿ ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ ರೂ.30,000 ಗಳಿಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದಲ್ಲಿ ಅಂತಹ ವ್ಯಕ್ತಿಗಳು ಯೋಜನೆಗೆ ಅರ್ಹರಿರುವುದಿಲ್ಲ. ಪ್ರಧಾನ ಅರ್ಜಿದಾರರು ಅಥವಾ ಅವನ ಕುಟುಂಬದ ಸದಸ್ಯರು ಯಾವುದೇ ವಿಮಾ ಯೋಜನೆಯಡಿಯಲ್ಲಿ ಸದಸ್ಯನಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆಯಡಿ ಸದಸ್ಯನಾಗಲು ಅರ್ಹರಿರುವುದಿಲ್ಲ.

ಮೇಲೆ ವಿವರಿಸಿರುವಂತೆ ಯಶಸ್ವಿನಿ ಯೋಜನೆಯಲ್ಲಿ ವ್ಯಾಕ್ಯಾನಿಸಿರುವ ಅರ್ಹಕುಟುಂಬ ಸದಸ್ಯರನ್ನು ಹೊರತುಪಡಿಸಿ ಇತರೆ ಸದಸ್ಯರು ಯೋಜನೆಗೆ ಅರ್ಹರಿರುವುದಿಲ್ಲ.