ನಮ್ಮ ಬಗ್ಗೆ

ರಾಜ್ಯದ ರೈತರು ಮತ್ತು ಗ್ರಾಮೀಣ ಪ್ರದೇಶದ ಬಡವರು ತಮ್ಮ ದೊಡ್ಡ ಖಾಯಿಲೆಗಳಿಗೆ ಮತ್ತು ಶಸ್ತ್ರಚಿಕಿತ್ಸೆಗಳ ವೆಚ್ಚಕ್ಕಾಗಿ ಲೇವಾದೇವಿಗಾರರ ಮತ್ತು ಶ್ರೀಮಂತರ ಆಶ್ರಯ ಪಡೆಯಬೇಕಿತ್ತು ಅಥವಾ ಬ್ಯಾಂಕಿನಿಂದ ಸಾಲ ಪಡೆದು ತಮ್ಮ ಆಸ್ತಿ ಮತ್ತು ಸರ್ವಸ್ವವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ 2003 ಜೂನ್ ಮಾಹೆಯಲ್ಲಿ ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳ ಸದಸ್ಯರಿಗಾಗಿಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯನ್ನುರಾಷ್ಟ್ರದಲ್ಲೇ ಪ್ರಪ್ರಥಮವಾಗಿ PPP ಮಾದರಿಯಲ್ಲಿ ಅಂದಿನ ರಾಜ್ಯ ಸರ್ಕಾರವು ರೂಪಿಸಿ ಅನುಷ್ಠಾನಗೊಳಿಸಿತು. 2014-15ನೇ ಸಾಲಿನಿಂದ ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಿಸಲಾಯಿತು.

ಯೋಜನೆಯಡಿ ನಿಗದಿಪಡಿಸಿದ ವೈದ್ಯಕೀಯ ಕ್ಷೇತ್ರದ 14 ವಿಭಾಗಗಳಲ್ಲಿ ಗುರುತಿಸಲಾದ 823 ಶಸ್ತ್ರಚಿಕಿತ್ಸೆಗಳಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ರಾಜ್ಯಾದ್ಯಂತ ಗುರುತಿಸಿರುವ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು.

ಯೋಜನೆ 2003-04 ರಿಂದ 2016-17 ರವರೆಗೆ ಸಹಕಾರ ಇಲಾಖೆಯಲ್ಲಿ ಅನುಷ್ಠಾನಗೊಳಿಸಿದ್ದು 2017-18 ರಲ್ಲಿ ಸರ್ಕಾರದ ಆದೇಶದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಯಾಗಿದ್ದು, ದಿನಾಂಕ 01-06-2018 ರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.